ಭಟ್ಟಿಫ್ರೋಲು
	ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲಿ ತಾಲ್ಲೂಕಿನಲ್ಲಿರುವ ಒಂದು ಪ್ರಾಚೀನ ಬೌದ್ಧಕ್ಷೇತ್ರ. ಇದಕ್ಕೆ ಪ್ರತಿಪಾಲಪುರವೆಂಬ ಹೆಸರೂ ಇದೆ. ಅಲೆಕ್ಸಾಂಡ್ರಿಯಾ ಎಂಬ ಪುರಾತತ್ವಶಾಸ್ತ್ರಜ್ಞ 1892ರಲ್ಲಿ ಉತ್ಖನನ ನಡೆಸಿದಾಗ ಇಲ್ಲಿ ಮೂರು ಶಿಲಾಪೆಟ್ಟಿಗೆಗಳೂ ಕೆಲವು ಆಭರಣಗಳೂ ದೊರೆತವು. ಗ್ರಾಮದಲ್ಲಿ ಮೂರು ಮಣ್ಣಿನ ದಿಬ್ಬಗಳನ್ನು ಪರಿಶೋಧಿಸಿದಾಗ ಬೌದ್ಧಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಅವಶೇಷಗಳು ದೊರೆತವು. ಇದಕ್ಕೂ ಮೊದಲೇ 1870ರಲ್ಲಿ ಜಾಸ್ವೆಲ್, ಅನಂತರ ವಾಲ್ಟರ್ ಎಲಿಯಟ್ ಮತ್ತು 1878ರಲ್ಲಿ ರಾಬರ್ಟ್ ಸೊಯಲ್ ಅವರು ಇಲ್ಲಿ ಸಂಶೋಧನೆ ನಡೆಸಿದ್ದರು.

	ಒಂದನೆಯ ಮಣ್ಣಿನ ದಿಬ್ಬದಲ್ಲಿ ಕಂಡುಬಂದ ಬೌದ್ಧಮಹಾಸ್ತೂಪ ಪ್ರಾಚೀನ ಬೌದ್ಧ ಸಂಸ್ಕøತಿಯ ಕುರುಹಾಗಿದೆ. ಇದರ ಸುತ್ತಲೂ ಎತ್ತರದ ಪ್ರಕಾರವನ್ನು ರಚಿಸಿ ಪ್ರದಕ್ಷಿಣಾಪಥ ನಿರ್ಮಿಸಿದ್ದಾರೆ. ಪ್ರಾಕಾರದಲ್ಲಿ ಚಿತ್ರ ವಿಚಿತ್ರ ಶಿಲ್ಪಕಲೆಗಳೂ ಸುಂದರ ಸ್ಫಟಿಕ ಫಲಕಗಳೂ ಇವೆ. ಮಹಾಸ್ತೂಪದ ಮಧ್ಯದಲ್ಲಿದ್ದ ರಂಧ್ರ ಸ್ಥಳದಲ್ಲಿ ಮೂರು ಕಲ್ಲಿನ ಪೆಟ್ಟಿಗೆಗಳು ದೊರೆತಿವೆ. ಇವುಗಳಲ್ಲಿ ಮೂಳೆ, ನೀಲಿಕಲ್ಲು, ಹಸುರು ಪಚ್ಚೆ ಸ್ಫಟಿಕದ ಕಲ್ಲು, ಷಡ್ಭುಜಾಕಾರದ ಚಿಕ್ಕ ಹಸುರು ಪಚ್ಚೆಯ ಸ್ಫಟಿಕ, ಒಳ್ಳೆಯ ಮುತ್ತು, ಬಂಗಾರದ ಹೂ, ಆಯುಧಪಾಣಿ ಬೊಂಬೆ ಮತ್ತು ತಾಮ್ರದ ಚೂರು ಇದ್ದು ಇವು ಬುದ್ಧನ ಕುರುಹುಗಳುಳ್ಳ ಪೆಟ್ಟಿಗೆ ಎನ್ನುತ್ತಾರೆ. ಇಲ್ಲಿ ಅಪೂರ್ವ ಶಿಲ್ಪ ಸೌಂದರ್ಯವುಳ್ಳ ಶಿಲ್ಪಗಳೂ ಶಿಲ್ಪಗಳನ್ನು ಕೆತ್ತಲು ಉಪಯೋಗಿಸುವ ಸಾಧನಗಳೂ ದೊರಕಿವೆ.

	ಸ್ತೂಪವನ್ನು ಕೇವಲ ಇಟ್ಟಿಗೆ ಹಾಗೂ ಮಣ್ಣಿನಿಂದ ನಿರ್ಮಿಸಲಾಗಿದೆ. ಇದು ಮೌರ್ಯರ ಕಾಲಕ್ಕೆ ಸೇರಿದ ಪ್ರಾಚೀನ ಶಿಲ್ಪವೆಂದು ಪುರಾತತ್ವಜ್ಞರ ಊಹೆ. ಆದರೆ ಇದು ಕ್ರಿ.ಪೂ. 3ನೆಯ ಶತಮಾನಕ್ಕೆ ಸೇರಿದ ಅವಶೇಷಗಳೆಂಬುದೇ ಹೆಚ್ಚಿನ ವಿದ್ವಾಂಸರ ಅಭಿಪ್ರಾಯ. ಇದರ ನಿರ್ಮಾಣವಿಧಾನ ಜಗ್ಗಯಪೇಟೆ ಮತ್ತು ಅಮರಾವತಿಯಲ್ಲಿರುವ ಸ್ತೂಪದ ನಿರ್ಮಾಣವನ್ನು ಹೋಲುತ್ತಿದ್ದು ಇದನ್ನು ಇಕ್ಷ್ವಾಕು ವಂಶದ ರಾಜರು ನಿರ್ಮಿಸಿರಬಹುದು. ಮುಖ್ಯವಾಗಿ ಬುದ್ಧನ ಮರಣಾನಂತರ ಅವನ ಅಸ್ಥಿಯ ಅವಶೇಷಗಳಿಗಾಗಿ ನಿರ್ಮಿಸಿರಬಹುದು ಎಂಬ ಹೇಳಿಕೆಗಳು ಪ್ರಚಲಿತವಾಗಿವೆ.

	ಎರಡನೆಯ ಮಣ್ಣಿನ ದಿಬ್ಬದಲ್ಲಿ ಎರಡನೆಯ ಸ್ತೂಪಕ್ಕೆ ಸಂಬಂಧಿಸಿದ ಕೆಲವು ಶಿಥಿಲಾವಶೇಷಗಳು, ಭರಣಿಗಳು, ಗುಂಡಗಳು ದೊರೆತರೆ ವಿಕ್ರಮಾರ್ಕಕೋಟ ದಿಬ್ಬವೆಂದು ಜನಗಳು ಕರೆಯುವ ಮೂರನೆಯ ದಿಬ್ಬದಲ್ಲಿ ಬೌದ್ಧಸ್ಥೂಪಕ್ಕೆ ಸೇರಿದ ದೊಡ್ಡ ಇಟ್ಟಿಗೆಗಳೂ ಅನೇಕ ಅವಶೇಷಗಳೂ ರಾಶಿ ರಾಶಿಯಾಗಿ ದೊರೆತಿವೆ. ಈ ಎಲ್ಲ ಕುರುಹುಗಳಿಂದ ಈ ಬೌದ್ಧಕ್ಷೇತ್ರ ಒಂದು ಕಾಲದಲ್ಲಿ ಬೌದ್ಧ ಸಾಹಿತ್ಯ-ಸಂಸ್ಕøತಿಗಳ ಕೇಂದ್ರವಾಗಿತ್ತೆನ್ನಬಹುದು.  						
	(ಕೆ.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ